ಶ್ರೀಭಂಡಾರಕೇರಿ ಮಠ

ಆಚಾರ್ಯ ಮಧ್ವರ ಆಶ್ರಮ ಗುರುಗಳೇ ಅಚ್ಯುತಪ್ರಜ್ಞರು. ಇವರ ಪರಂಪರೆಯೇ ಭಂಡಾರಕೇರಿ ಮಠ. ಈ ಸ್ಥಳವು ಉಡುಪಿಯಿಂದ ಉತ್ತರಕ್ಕೆ ೨೦ ಕಿ.ಮೀ. ದೂರದಲ್ಲಿರುವ ಬಾರಕೂರಿನಲ್ಲಿದೆ. ಆಧುನಿಕ ಯುಗದ ಜಂಜಾಟಗಳಿಂದ ದೂರವಾಗಿ ಸಸಿ-ಗಿಡಗಳ ನಿರ್ಮಲ ಪರಿಸರ-ಪಕ್ಷಿಗಳ ಕಲರವ-ಅಬ್ಬರಗಳಿಲ್ಲದ ಪ್ರಶಾಂತತೆ - ಮೈಮನಗಳನ್ನು ಸಾಧನೆಗೆ ಅಣಿಗೊಳಿಸುವ ಸರೋವರ ಇವುಗಳಿಂದ ಕೂಡಿರುವ ಈ ಸ್ಥಳ ತಪೋವನವಾಗಿದ್ದು ಸಾಧಕರಿಗೆ ಹೇಳಿಮಾಡಿಸಿದಂತಿದೆ. ಬಾರಕೂರು ಗ್ರಾಮ ಸಾಧಕರನ್ನು ಬರಮಾಡಿಕೊಂಡು ಸಾಧನೆಗೆ ಕೂರು ಎಂದು ಪ್ರೇರೇಪಿಸಲು ಮೂಲಸ್ಫೂರ್ತಿ ನೀಡುವಂತಿದೆ. ಇಲ್ಲಿಯೇ ಹಲವು ಕಾಲನೆಲಿಸಿ ಸಾಧನೆಯ ಮಾಡಿದ ಪರಮಪೂಜ್ಯ ಶ್ರೀಶ್ರೀವಿದ್ಯಾಮಾನ್ಯತೀರ್ಥರ ದೈಹಿಕ ತಪಸ್ಸು-ಜ್ಞಾನಗಳ ದೃಡೀಕರಣ ಆ ಸಾಮರ್ಥ್ಯ ಇಲ್ಲಿ ಇನ್ನೂ ಇರುವುದಕ್ಕೆ ಜೀವಂತ ಸಾಕ್ಷಿಯಾಗಿದೆ. ಈ ಸಂಸ್ಥಾನದ ಆರಾಧ್ಯಮೂರ್ತಿ ಶ್ರೀಸೀತಾಲಕ್ಷ್ಮಣ ಸಹಿತ ಶ್ರೀಕೋದಂಡರಾಮಚಂದ್ರನಾಗಿದ್ದಾನೆ.